ಚಿತ್ರಮೂಲ-
ಪ್ಲಂಬ್ಯಾಜಿನೇಸೀ ಕುಟುಂಬಕ್ಕೆ ಸೇರಿದ ಒಂದು ಬಹು ವಾರ್ಷಿಕ ಪೊದೆಸಸ್ಯ. ಪ್ಲಂಬ್ಯಾಗೊ ಜಿóಲ್ಯಾನಿಕ ಇದರ ಶಾಸ್ತ್ರೀಯ ಹೆಸರು. ಇದಕ್ಕೆ ಬಿಳಿಚಿತ್ರಮೂಲ ಎಂಬ ಹೆಸರು ಇದೆ. ಅಲ್ಲದೆ ಇದನ್ನೇ ಹೋಲುವ ಕೆಂಪು ಚಿತ್ರಮೂಲ (ಪ್ಲಮಬ್ಯಾಗೋ ಇಂಡಿಕ) ಮತ್ತು ತೋಟಗಳಲ್ಲಿ ಅಲಂಕಾರಕ್ಕೆಂದು ಬೆಳೆಸಲಾಗುವ ನೀಲಿ ಚಿತ್ರಮೂಲ (ಪ್ಲ. ಆರಿಕ್ಯುಲೇಟ) ಎಂಬುವೂ ಇವೆ. ಇವೆಲ್ಲವೂ ಉಷ್ಣದೇಶಗಳ ನಿವಾಸಿಗಳು. ಭಾರತದಲ್ಲೂ ಇವು ಕಾಣಬರುತ್ತವೆ. ಚಿತ್ರಮೂಲ ಸುಮಾರು 11/2 - 3 ಅಡಿ ಎತ್ತರಕ್ಕೆ ಬೆಳೆಯುವ ಗಿಡ. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಅವುಗಳ ಆಕಾರ ಅಂಡದಂತೆ. ಮೃದುವಾಗಿಯೂ ರೋಮ ರಹಿತವಾಗಿಯೂ ಇವೆ. ಹೂಗಳು ಚಿಕ್ಕವು. ಕದಿರುಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪುಷ್ಪ ಪಾತ್ರೆಯ ಮೇಲೆಲ್ಲ ಅಂಟು ದ್ರವವೊಂದನ್ನು ಸ್ರವಿಸುವ ಗ್ರಂಥಿ  ರೋಮಗಳಿವೆ. ಚಿತ್ರಮೂಲ ಆಯುರ್ವೇದ ಔಷಧ ಪದ್ಧತಿಯಲ್ಲಿ ಉಪಯುಕ್ತವೆನಿಸಿದೆ. ಇದರಲ್ಲಿರುವ ಪ್ಲಂಬ್ಯಾಜಿನ್ ಎಂಬ ಅಂಶವೇ ಇದಕ್ಕೆ ಕಾರಣ. ಇದರ ಬೇರು ವಿಷಯುಕ್ತ. ಆದ್ದರಿಂದ ಬಳಸುವಾಗ ಜಾಗ್ರತೆ ವಹಿಸಬೇಕು. ಎಲೆ ಮತ್ತು ಬೇರುಗಳನ್ನು ಅರೆದು ಅನ್ನದೊಂದಿಗೆ ಬೆರೆಸಿ ಚರ್ಮವ್ಯಾಧಿಗಳಿಗೆ ಕಟ್ಟುವರು. ಇದರ ಬೇರುಗಳಿಂದ ತೆಗೆದ ಕಷಾಯವನ್ನು ತುರಿಕೆರೋಗ ನಿವಾರಿಸಲು ಫಿಲಿಪೀನ್ಸ್ ದ್ವೀಪಗಳಲ್ಲಿ ಉಪಯೋಗಿಸುವರು. ಭಾರತ ಮತ್ತು ಜಪಾನುಗಳಲ್ಲಿ ಇದನ್ನು ಗರ್ಭನಿರೋಧಕ್ಕೆ ಉಪಯೋಗಿಸುವುದುಂಟು. ಆಫ್ರಿಕ ಮತ್ತಿತರ ದೇಶಗಳಲ್ಲಿ ಇದರ ರಸವನ್ನು ಬಿಕ್ಷುಕರು ಮೈಗೆ ಹಚ್ಚಿಕೊಂಡು ಬೊಬ್ಬೆಗಳನ್ನು ಹುಟ್ಟಿಸಿಕೊಳ್ಳುವುದುಂಟು. ನೈಜೀರಿಯದಲ್ಲಿ ಇದರ ಬೇರಿನ ರಸವನ್ನು ಬೆಂಡೇ ರಸದೊಂದಿಗೆ ಬೆರಿಸಿ ಕುಷ್ಠರೋಗ ಚಿಕಿತ್ಸೆಯಲ್ಲಿ ಬಳಸುವುದಿದೆ. ವಿಪರೀತ ಜ್ವರ ಬಂದಾಗ ಮೈ ಬೆವರುವಂತೆ ಮಾಡಲು ಇದನ್ನು ಉಪಯೋಗಿಸುವುದುಂಟು. ಚಿತ್ರಮೂಲವನ್ನು ಬೇರಿನ ಕಂದುಗಳಿಂದ ಮತ್ತು ಕಾಂಡ ತುಂಡುಗಳಿಂದ ಇಲ್ಲವೆ ಬೀಜಗಳಿಂದ ಬೆಳೆಸಬಹುದು.
(ಎಂ.ಎಚ್.ಎಂ.; ವಿ.ಎಸ್.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ